Friday, April 3, 2026

ಮೋಹನ

ಲೂಟಿ ಮಾಡಬೇಡ ನೀನು, ಮೋಹನ,

ನಿನ್ನ ಕಾಟ ತಾಳಲಾರೆ.. ನಿನಗೆ ಊಟ ಬಡಿಸಲೇ?!


ಗೆಜ್ಜೆಸದ್ದಿನೊಡನೆ ಪುಟ್ಟ 

ಹೆಜ್ಜೆಯಿಡುತ ಬರುವೆ ಹಿಂದೆ

ಕುಬ್ಜ, ನಿನ್ನ ಎತ್ತಿಕೊಳಲು 

ಲಜ್ಜೆ ಬಿಟ್ಟು ಕೇಳುತೀಯೆ..  ||ಲೂಟಿ||


ಹಾಲ ಕಾಸಲೆಂದು ಹೊರಡೆ 

ಹಾಲುಗಲ್ಲವರಳಿಸುತ್ತ

ಹಲ್ಲನೆರಡು ತೋರಿಸುತ್ತ

ಹಲವು ಕೆಲಸ ಮರೆಸುತೀಯೆ.. ||ಲೂಟಿ||


ಪೇಟೆಯಿಂದ ತಂದ ಚೀಲ

ಗೂಟದಲ್ಲಿ ನೇಲಿಸಿರಲು

ಆಟವಾಡುತಲ್ಲಿ ಬಂದು

ಚೂಟಿಯಾಗಿ ಎಳೆಯುತೀಯೆ.. ||ಲೂಟಿ||


ಕೀಟಲೆಗಳ ಸಹಿಸೆನೆಂದು

ಮಾತೆ ಬಂದು ಬೆದರಿಸಿರಲು

ನೋಟದಲ್ಲೆ ಸೆಳೆಯುವಂತ 

ಮಾಟದಂತ ನಗುವದೇನು?


ಲೂಟಿ ಮಾಡಬೇಡ ನೀನು, ಮೋಹನ.. ಮನ ಮೋಹನ...

ನಿನ್ನ ಕಾಟ ತಾಳಲಾರೆ.. ನಿನಗೆ ಊಟ ಬಡಿಸಲೇ?! ನಿನಗೆ ಊಟ ಉಣಿಸಲೇ?!!

ಧ್ವನಿ: 

೧. https://drive.google.com/file/d/1BLjp7j0KoiTQZ16EBqDNzOu-Q5A_xxAd/view?usp=sharing
೨. https://drive.google.com/file/d/1bYP6EdSqdFPqlURYtAe2h64Mo-Aa_P5W/view?usp=sharing

Tuesday, January 27, 2026

ಮೌನರಾಗ

ಹೇಳದೆ ಉಳಿದ ಮಾತುಗಳೆಷ್ಟೋ..

ಮನದಲಿ ಮಿಡಿದ ಭಾವಗಳೆಷ್ಟೋ..

ಕಣ್ಣಿಗೆ ಕಾಣದ ಬಣ್ಣಗಳೆಷ್ಟೋ.. 

ನಾಸಿಕ ನೋಡದ ಗಂಧಗಳೆಷ್ಟೋ..

 

ನೆನಪಿನ ತೇರಿನ ಬಾವುಟ ಹೊತ್ತು

ತಣ್ಣನೆ ಗಾಳಿಯ ಹೂವಿನ ಮತ್ತು

ಮನಸಿನ ಮುಚ್ಚಿದ ಕದ ತೆರೆಸಿತ್ತು

ಹುಣ್ಣಿಮೆ ಬೆಳಕಿನ ಸುಧೆ ಹರಿಸಿತ್ತು


ನಿನ್ನಯ ನಗುವಿನ ಮಲ್ಲಿಗೆ ಸಾಲು

ಬೀರಿದ ಪ್ರೀತಿಯ ಕಂಪಿನ ಹಾಲು

ಬತ್ತಿದ ಎನ್ನಯ ಹೃದಯಂಗಳದಿ

ತುಂಬಿತು ಸಂತಸ ಉಕ್ಕುವ ತೆರದಿ 


ನಿನ್ನೆಡೆ ಬರಲು ಮನ ಬಿಚ್ಚಿಡಲು 

ಎನ್ನೆದೆ ಒಳದನಿಯನು ಕೇಳಿಸಲು 

ಹಾತೊರೆದರು ಮೌನದಿ ಎನ್ನೊಡಲು

ದೂರಕೆ ಸರಿಸಿತು ನಡುವಿನ ಕಡಲು


ಬಾನಿನ ತಾರೆಯ ಹಿಡಿಯಲು ಬಹುದೇ

ಹರಿಯುವ ನೀರನು ತಡೆಯಲು ಬಹುದೇ

ದೂರದಿ ನಿಂತೇ ನೋಡುವೆ ನಿನ್ನ 

ಅಮಿತಾನಂದದ ಬಾಳುವೆಯನ್ನ

                     - ೨೭/೦೧/೨೦೨೬

ಮೋಹನ

ಲೂಟಿ ಮಾಡಬೇಡ ನೀನು, ಮೋಹನ, ನಿನ್ನ ಕಾಟ ತಾಳಲಾರೆ.. ನಿನಗೆ ಊಟ ಬಡಿಸಲೇ?! ಗೆಜ್ಜೆಸದ್ದಿನೊಡನೆ ಪುಟ್ಟ  ಹೆಜ್ಜೆಯಿಡುತ ಬರುವೆ ಹಿಂದೆ ಕುಬ್ಜ, ನಿನ್ನ ಎತ್ತಿಕೊಳಲು  ಲಜ್ಜೆ...